ಕುಶಾಲ ನಗರ
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಒಂದು ಪಟ್ಟಣ. ಮಡಿಕೇರಿಯಿಂದ 30ಕಿಮೀ ಪೂರ್ವಕ್ಕಿದೆ. ಜನಸಂಖ್ಯೆ 13262. ಇದರ ಪೂರ್ವದ ಬದಿಗಾಗಿ ಕಾವೇರಿ ನದಿ ಹರಿಯುತ್ತದೆ. ಕಾವೇರಿ ನದಿಗೆ ಇಲ್ಲಿ ಕಳೆದ ಶತಮಾನದಲ್ಲೇ ಕಟ್ಟಿದ ಸೇತುವೆಯಿದೆ. ಮಡಿಕೇರಿ,ಮೈಸೂರು ಮುಖ್ಯ ರಸ್ತೆ ಈ ಊರ ಮೂಲಕ ಹಾದುಹೋಗುವುದಲ್ಲದೆ ಸಿದ್ಧಾಪುರ, ಹೆಬ್ಬಾಲೆ ಮತ್ತು ಸೋಮವಾರಪೇಟೆಗಳಿಗೂ ರಸ್ತೆಗಳಿವೆ. ಸಾರಿಗೆ ಸಂಚಾರದ ಸೌಲಭ್ಯ ಉತ್ತಮವಾಗಿರುವುದರಿಂದ ಇದೊಂದು ಮುಖ್ಯ ವ್ಯಾಪಾರಸ್ಥಳ. ಕೊಡಗಿನಲ್ಲಿ ಎರಡು ಸಂಸ್ಕರಣ ಸಹಕಾರಿ ಸಂಘ ಮತ್ತು ಕಾರ್ಖಾನೆಗಳಲ್ಲಿ ಒಂದು ಕುಶಾಲನಗರದಲ್ಲಿದೆ.

	1773ರಲ್ಲಿ ಕೊಡಗಿಗೆ ಮೊದಲಬಾರಿಗೆ ದಂಡೆತ್ತಿ ಬಂದಿದ್ದ ಹೈದರ್ ಅಲಿ ಆಗ ಒಂದು ಹಳ್ಳಿಯಾಗಿದ್ದ ಈ ಸ್ಥಳಕ್ಕೆ, ತಾನು ಅಲ್ಲಿದ್ದಾಗ ತನಗೆ ದೊರೆತ ಒಂದು ಸಂತೋಷದ ವರ್ತಮಾನದ ನೆನಪಿಗಾಗಿ ಕುಶಾಲ್ ನಗರವೆಂದು ಹೆಸರಿಟ್ಟ. ಟಿಪ್ಪುಸುಲ್ತಾನ ಇಲ್ಲಿ ಒಂದು ಕೋಟೆಯನ್ನು ಕಟ್ಟಿಸಿ ಸೈನ್ಯ ಠಾಣ್ಯ ಮಾಡಿದ್ದ. 1789ರಲ್ಲಿ ದೊಡ್ಡ ವೀರರಾಜೇಂದ್ರ ಒಡೆಯ ಈ ಕೋಟೆಯನ್ನು ಹಿಡಿದುಕೊಂಡ. ಈಗಲೂ ಈ ಕೋಟೆಯ ಕೆಲವು ಅವಶೇಷಗಳನ್ನು ಕುಶಾಲನಗರದಲ್ಲಿ ಕಾಣಬಹುದು. 1834ರಲ್ಲಿ ಬ್ರಿಟಿಷರು ಕೊಡಗನ್ನು ತಮ್ಮ ಆಡಳಿತಕ್ಕೊಳಪಡಿಸಿದ ಮೇಲೆ ಆಗ ಬ್ರಿಟಿಷ್ ಆಡಳಿತಾಧಿಕಾರಿಯಾಗಿದ್ದ ಕರ್ನಲ್ ಫ್ರೇಸರ್, ಅದುವರೆಗೆ ನಂಜರಾಜಪಟ್ಟಣದಲ್ಲಿದ್ದ ತಾಲ್ಲೂಕು ಅಧಿಕಾರಿಗಳ ಕಚೇರಿಯನ್ನು ಇಲ್ಲಿಗೆ ವರ್ಗಾಯಿಸಿ ಇದಕ್ಕೂ ಫ್ರೇಸರ್‍ಪೇಟೆ ಎಂದು ತನ್ನ ಹೆಸರಿಟ್ಟ. 1895ರಲ್ಲಿ ತಾಲ್ಲೂಕು ಕಛೇರಿ ಇಲ್ಲಿಂದ ಸೋಮವಾರಪೇಟೆಗೆ ವರ್ಗಾವಣೆಯಾಯಿತು.

ತೂಗುಸೇತುವೆ, ಕುಶಾಲನಗರ

	ಇಲ್ಲಿ ಮಡಿಕೇರಿಗಿಂತ ಮಳೆ ಮತ್ತು ಚಳಿ ಕಡಿಮೆಯಾಗಿರುವುದರಿಂದ ಆ ಕಾಲಗಳಲ್ಲಿ ಬ್ರಿಟಿಷರು ತಮ್ಮ ಕಛೇರಿಗಳನ್ನು ಇಲ್ಲಿಗೆ ವರ್ಗಾಯಿಸುತ್ತಿದ್ದರು. ಕುಶಾಲನಗರಕ್ಕೆ ಹೊಂದಿಕೊಂಡಂತೆ ಕಾವೇರಿ ನಿಸರ್ಗಧಾಮವಿದೆ. 65 ಎಕರೆ ವಿಸ್ತಾರ ಪ್ರದೇಶದಲ್ಲಿರುವ ಈ ತಾಣ ಪ್ರಕೃತಿ ಪ್ರಿಯರಿಗೊಂದು ಆಕರ್ಷಕ ತಾಣ. ಹಸುರು ಬಿದಿರು ಮೆಳೆಗಳಿಂದ ಕಂಗೊಳಿಸುತ್ತಿರುವ ದ್ವೀಪದ ಸುತ್ತಲೂ ಕಾವೇರಿ ನದಿ ಹರಿಯುತ್ತಿದೆ. ದ್ವೀಪದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ತೂಗುಸೇತುವೆ ನಿರ್ಮಿಸಲಾಗಿದೆ. ನದಿಯಲ್ಲಿ ದೋಣಿ ವಿಹಾರದ ವ್ಯವಸ್ಥೆ ಇದೆ. ಈ ನಿಸರ್ಗಧಾಮದಲ್ಲಿ ಬಿದಿರು ಮೆಳೆ ಸೇರಿದಂತೆ ಅನೇಕ ಔಷಧ ಸಸ್ಯಗಳಿವೆ. ಇಲ್ಲಿ ಮರಗಳ ಮೇಲೆ ವಸತಿ ನಿರ್ಮಿಸಲಾಗಿದೆ. ಪ್ರವಾಸಿಗರಿಗಾಗಿ ಕೇವಲ ಮರದಿಂದಲೇ ನಿರ್ಮಿಸಿರುವ ಅತಿಥಿಗೃಹಗಳಿವೆ. ಕಾಡಿನಲ್ಲಿ ಜಿಂಕೆಗಳ ಹಿಂಡಿನ ದೃಶ್ಯ ಕಂಡುಬರುತ್ತದೆ. ಆನೆಸವಾರಿ ಇಲ್ಲಿಯ ಆಕರ್ಷಣೆಗಳಲ್ಲೊಂದಾಗಿದೆ. 		                                  (ಡಿ.ಎನ್.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ